Karnataka Rashana Vedike
Kuvempu
ico_adhyaksharalEkhaniyinda3.jpg
kannadiga.jpg
blog.jpg

ನೈರುತ್ಯ ರೈಲ್ವೇ ವಲಯದ ಕನ್ನಡ ವಿರೋಧಿ ನಿಲುವಿನ ವಿರುದ್ಧ ಕ.ರ.ವೇ ಪ್ರತಿಭಟನೆ

ಕ.ರ.ವೇ ಹೋರಾಟಗಳು

ಬೆಂಗಳೂರು, ಮೈಸೂರು ಮುಂತಾದ ಕರ್ನಾಟಕದ ಮುಖ್ಯ ರೈಲ್ವೇ ನಿಲ್ದಾಣಗಳನ್ನು ಒಳಗೊಂಡಂತೆ ಹುಬ್ಬಳ್ಳಿಯನ್ನು ಕೇಂದ್ರವಾಗಿಸಿಕೊಂಡು ಸ್ಥಾಪಿತಗೊಂಡಿರುವುದು ನಮ್ಮ ನೈರುತ್ಯ [ದಕ್ಷಿಣ-ಪಶ್ಚಿಮ]ರೈಲ್ವೇ ವಲಯ.

ಈ ರೈಲ್ವೇ ವಲಯ ಕರ್ನಾಟಕದಲ್ಲಿನ ರೈಲ್ವೇ ಸಂಪರ್ಕ ನಿರ್ವಹಣೆ-ವಿಸ್ತರಣೆಯ ಕನಸು ಮತ್ತು ಕನ್ನಡಿಗನ ಆಶೋತ್ತರಗಳಾಗಿ ರೂಪುಗೊಂಡದ್ದು. ಸಹಜವಾಗಿ ಈ ವಲಯದಲ್ಲಿ ಲಭ್ಯವಾಗುವ ಎಲ್ಲಾ ಕೆಲಸಗಳು ಕನ್ನಡಿಗನಿಗೆ ದೊರಕಬೇಕಾದದ್ದು ಅವನ ಹಕ್ಕು. ಕನ್ನಡಿಗನ ಈ ಅವಿಚ್ಛಿನ್ನ ಹಕ್ಕನ್ನು ಕಸಿಯಲು, ಅವನಿಗೆ ಅವನ ನಾಡಿನಲ್ಲಿ ದೊರಕಬೇಕಾದ ಈ ಸೌಲಭ್ಯದಿಂದ ವಂಚಿತನಾಗಿಸಲು ಹುನ್ನಾರಗಳು ಒಂದರ ಹಿಂದೊಂದರಂತೆ ವ್ಯವಸ್ಥಿತವಾಗಿ ನಡೆಯಿತ್ತಿರುವುದನ್ನು ಇಂದು ನಾವೆಲ್ಲರೂ ಎಚ್ಚರಗೊಂಡು ಗಮನಿಸಬೇಕಿದೆ.

ಈ ವಲಯದಲ್ಲಿ ಖಾಲಿಯಿದ್ದ / ಭರ್ತಿಯಾಗಬೇಕಿದ್ದ ಡಿ ಗುಂಪಿನ ಕೆಲಸಗಳಾದ ಗ್ಯಾಂಗ್ ಮನ್, ಹಳಿ ನಿಯಂತ್ರಕ, ಖಲಾಸಿ [ಕಾರ್ಯಾಗಾರಗಳ ಸಹಾಯಕ], ಸಾಮಾನು ಹೊರುವ ಕೂಲಿ ಕೆಲಸಗಳಿಗೂ ಸಹ ಕನ್ನಡ ಅಭ್ಯರ್ಥಿಗಳಿಗೆ ಆಧ್ಯತೆ ನೀಡದೆ, ಬಿಹಾರ [ಮುಖ್ಯವಾಗಿ] ಮತ್ತು ಕರ್ನಾಟಕೇತರ ರಾಜ್ಯಗಳಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಚಟುವಟಿಕೆ ಇಂದು ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಕಾರ್ಯಾರಂಭಗೊಂಡಾಗ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು, ರಾಜ್ಯಾಧ್ಯಕ್ಷರಾದ ಟಿ. ಎ. ನಾರಾಯಣ ಗೌಡರ ನೇತೃತ್ವದಲ್ಲಿ ಈ ಸ್ಥಳಗಳಿಗೆ ಮುತ್ತಿಗೆ ಹಾಕಿ, ರೈಲ್ವೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಆಯ್ಕೆ ಪ್ರಕ್ರಿಯೆಯಲ್ಲಿ ಕನ್ನಡಿಗರನ್ನು ಕಡೆಗಣಿಸಿ ಪರರಾಜ್ಯದವರಿಗೆ ಮಣೆ ಹಾಕುತ್ತಿರುವ ಬಗ್ಗೆ ಆಕ್ಷೇಪಿಸಿ, ಕನ್ನಡಿಗ ಅಭ್ಯರ್ಥಿಗಳಿಗೆ ಈ ಕೆಲಸಗಳು ದೊರಕಬೇಕು ಎಂದು ಆಗ್ರಹಿಸಿದ್ದುದರ ಪರಿಣಾಮವಾಗಿ, ಈ ಕೆಲಸಕ್ಕೆ ನಿಯೋಜಿತರಾಗಿದ್ದ ರೈಲ್ವೇ ಅಧಿಕಾರಿಗಳು ತಮ್ಮ ತಪ್ಪು ಅರಿವು ಮಾಡಿಕೊಂಡು ಆಯ್ಕೆ ಪ್ರಕ್ರಿಯೆಯನ್ನು ಸ್ಥಗಿತಿಗೊಳಿಸಿದರು. ಬೇರೆ ರಾಜ್ಯಗಳಿಂದ ಬಂದಿದ್ದ ಅಭ್ಯರ್ಥಿಗಳಿಗೆ ಈ ಕೆಲಸ ಕನ್ನಡಿಗರಿಗೇ ದೊರಕಬೇಕಾದುದನ್ನು ಮನವರಿಗೆ ಮಾಡಿಸಿ ಅವರನ್ನು ಅವರ ಊರುಗಳಿಗೆ ತೆರಳಲು ವ್ಯವಸ್ಥೆ ಮಾಡಲಾಯಿತು.

೨೦೦೭ ರ ಸೆಪ್ಟಂಬರ್ ತಿಂಗಳಿನಲ್ಲಿ ನೈರುತ್ಯ ವಲಯ ಬೆಂಗಳೂರಿನಲ್ಲಿ ಶೀಘ್ರಲಿಪಿಗಾರರ ಹುದ್ದೆಗೆ ಲಿಖಿತ ಪರೀಕ್ಷೆ [ಬಹುತೇಕ ಪರರಾಜ್ಯದವರೇ ಭಾಗವಹಿಸಿದ್ದ] ನಡೆಸುತ್ತಿದ್ದ ಸಮಯದಲ್ಲಿ ಸಹ ಕ.ರ.ವೇ ಯಶಸ್ವಿಯಾಗಿ ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ಪರೀಕ್ಷೆ ಸ್ಥಗಿತಗೊಂಡು ನಂತರದಲ್ಲಿ ಆ ಹುದ್ದೆಗಳು ಕನ್ನಡಿಗರಿಗೇ ದೊರಕಿಸುವಲ್ಲಿ ಕ.ರ.ವೇ ಯಶಸ್ವಿ ಕಾರ್ಯಾಚರಣೆ ನಡೆಸಿತ್ತು.

http://karave.blogspot.com/2007/09/blog-post_7232.html

ಈ ನಾಡಿನಲ್ಲಿ ಉತ್ಪತ್ತಿಯಾಗುವ ಉದ್ಯೋಗ ಈ ಮಣ್ಣಿನ ಮಗನಿಗೆ ಅನ್ನ-ಬಟ್ಟೆ-ಮನೆ-ನೆಮ್ಮದಿ ನೀಡುವ ಸಾಧನವಾಗಬೇಕು. ಹಾಗಾಗಿ ಕರ್ನಾಟಕ ರಾಜ್ಯದಲ್ಲಿ ಇರುವ ಯಾವುದೇ ಉದ್ದಿಮೆಗಳಲ್ಲಿ ಕನ್ನಡಿಗನಿಗೆ ಆಧ್ಯತೆ ಮೇಲೆ ಮೊದಲಿಗೆ ಉದ್ಯೋಗ ದೊರಕಿಸಿಕೊಡಬೇಕಿರುವುದು ಇಲ್ಲಿನ ವ್ಯವಸ್ಥೆಯಾಗಬೇಕು ಮತ್ತು ಇಲ್ಲಿ ಉದ್ದಿಮೆ ಹೂಡುವವರ ಜಪ ಮತ್ತು ಮಂತ್ರವಾಗಬೇಕು. ಈ ಹೋರಾಟಗಳ ಮೂಲಕ ಕ.ರ.ವೇ. ಕನ್ನಡ ವಿರೋಧಿ ವ್ಯವಸ್ಥೆಗೆ ಮತ್ತು ಆಡಳಿತಗಾರರಿಗೆ ನೀಡುತ್ತಿರುವ ಎಚ್ಚರಿಕೆಯ ಘಂಟೆ ಇದಾಗಿದೆ.

ಕನ್ನಡ ನಾಡು ನುಡಿಯ ರಕ್ಷಣೆಗೆ ಕಂಕಣಬದ್ಧವಾಗಿರುವ ಕ.ರ.ವೇ ಯ ಮೂಲ ಸಿದ್ಧಾಂತ ಮತ್ತು ಉದ್ದೇಶ ಸಹ ಕನ್ನಡ ನಾಡಿನಲ್ಲಿ ಕನ್ನಡಿಗನ ಸಾರ್ವಭೌಮತ್ವ. ನಮ್ಮ ಈ ಹೋರಾಟಕ್ಕೆ ನಿಮ್ಮಂತಹ ಸಹೃದಯಿ ಕನ್ನಡಿಗರ ಬೆಂಬಲವೇ ಶ್ರೀರಕ್ಷೆ.

 

ಕ.ರ.ವೇ ಹೋರಾಟಗಳು - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ