Karnataka Rashana Vedike
Kuvempu
ico_adhyaksharalEkhaniyinda3.jpg
kannadiga.jpg
blog.jpg

ಅಧ್ಯಕ್ಷರ ಲೇಖನಿಯಿಂದ.....

ಸಂಘಟನೆ
ಸ್ವಾಭಿಮಾನಿ ಕನ್ನಡ ಬಂಧುಗಳೇ,

ಇದೇ ತಿಂಗಳ ೨೩ರಂದು ಉದ್ಘಾಟನೆಗೊಳ್ಳಲು ಸಿದ್ಧವಾಗಿರುವ ಬೆಂಗಳೂರಿನ ದೇವನಹಳ್ಳಿಯಲ್ಲಿ ಕಟ್ಟಲಾಗಿರುವ ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ಮತ್ತು ಕನ್ನಡಿಗರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯು ಬೃಹತ್ ಜಾಥವೊಂದನ್ನು ನಡೆಸಿತು. ಯಲಹಂಕದಲ್ಲಿರುವ ಕೆಂಪೇಗೌಡ ಪುತ್ಥಳಿಯ ಬಳಿಯಿಂದ ಬೆಳಗ್ಗೆ ೧೧ಕ್ಕೆ ಆರಂಭವಾಗಿ ವಿಧಾನಸೌಧದವರೆಗೆ ನಡೆದ ಈ ಜಾಥಾದಲ್ಲಿ ಅನೇಕ ಮಠಾಧೀಶರೂ, ಸಾಹಿತಿಗಳು, ಬುದ್ಧಿಜೀವಿಗಳೂ, ನಾಡಪರ ಚಿಂತಕರೂ ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ನಮ್ಮ ಈ ಹೋರಾಟದ ಬಗ್ಗೆ ನಿಮ್ಮೊಂದಿಗೆ ಹಲವು ಮಾಹಿತಿಗಳನ್ನು ಹಂಚಿಕೊಳ್ಳಲು ಬಯಸುತ್ತೇವೆ.

ಈ ವಿಮಾನ ನಿಲ್ದಾಣದ ದೆಸೆಯಿಂದ ಹತ್ತಾರು ಸಾವಿರ ಉದ್ಯೋಗಗಳು ಹುಟ್ಟಿಕೊಳ್ಳಲಿದ್ದು, ಆ ಕೆಲಸಗಳ ಮೇಲಿನ ಮೊದಲ ಹಕ್ಕು ಕನ್ನಡಿಗರದ್ದಾಗಿದ್ದು ಕರ್ನಾಟಕ ರಕ್ಷಣಾ ವೇದಿಕೆಯ ಮೂಲಕ ಈ ಬಗ್ಗೆ ಕಳೆದೊಂದು ವರ್ಷದಿಂದಲೂ ನಾನಾ ಹಂತಗಳಲ್ಲಿ ಹೋರಾಟಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ದೇವನಹಳ್ಳಿಯ ಈ ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಲಕಾಲಕ್ಕೆ ಹುಟ್ಟಿಕೊಳ್ಳುವ ಎಲ್ಲ ಹಂತದ ಕೆಲಸಗಳಲ್ಲಿ ಕಡ್ಡಾಯವಾಗಿ ಕನ್ನಡಿಗರಿಗೇ ಆದ್ಯತೆ ನೀಡಬೇಕು. ಇಷ್ಟೇ ಅಲ್ಲದೆ ಈ ವಿಮಾನ ನಿಲ್ದಾಣಕ್ಕಾಗಿ ನಾಲ್ಕು ಸಾವಿರ ಎಕರೆಗೂ ಹೆಚ್ಚಿನ ನೆಲವನ್ನು ಬಿಟ್ಟು ಕೊಟ್ಟ ಸಾವಿರಾರು ಕುಟುಂಬಗಳ ಸದಸ್ಯರುಗಳಿಗೆ ಪರಿಹಾರ ರೂಪದಲ್ಲಿ ವಿಮಾನ ನಿಲ್ದಾಣದಲ್ಲಿ ಕೆಲಸ ನೀಡಬೇಕೆಂದೂ ಆಗ್ರಹಿಸಲಾಯಿತು.


ಕನ್ನಡನಾಡನ್ನು ಪ್ರಪಂಚದ ಇತರೆ ಭಾಗಗಳಿಗೆ ತೆರೆದುಕೊಳ್ಳುವ ಹೊಸ್ತಿಲಾಗಿರುವ ಈ ವಿಮಾನ ನಿಲ್ದಾಣದಲ್ಲಿ ಈ ನೆಲದ ನುಡಿ ಸಂಸ್ಕೃತಿಗಳಿಗೆ ಮೊದಲ ಮನ್ನಣೆ ದೊರೆಯಬೇಕಾಗಿದೆ. ಈ ಮೂಲಕ ವಿದೇಶಗಳ ಯಾತ್ರಿಕರಿಗೆ ನಮ್ಮ ಸಂಸ್ಕೃತಿ ಅನನ್ಯತೆಗಳ ಪರಿಚಯ ನೀಡಲು ಮುಂದಾಗಬೇಕಿದೆ. ಆ ನಿಟ್ಟಿನಲ್ಲಿ ವಿಮಾನ ನಿಲ್ದಾಣದ ಹೆಸರು, ನಾಮಫಲಕ, ವಹಿವಾಟು, ಅಲ್ಲಿರುವ ಎಲ್ಲ ಅಂಗಡಿ ಮುಂಗಟ್ಟುಗಳಲ್ಲಿಯೂ ಕನ್ನಡತನಕ್ಕೆ ಮತ್ತು ಕನ್ನಡಕ್ಕೆ ಅಗ್ರಸ್ಥಾನ ನೀಡುವುದು ಸರಿಯಾದುದಾಗಿದೆ. ಈ ಮಣ್ಣಿನ ಭಾಷೆಗೆ ಅಂತಹ ಸ್ಥಾನವನ್ನು ವಿಮಾನ ನಿಲ್ದಾಣದಲ್ಲಿ ನೀಡಲೇಬೇಕೆಂದು ಆಗ್ರಹಿಸಲಾಯಿತು. ನಮ್ಮ ನಾಡಿನ ವಿಮಾನ ನಿಲ್ದಾಣದಲ್ಲಿ ನಮ್ಮತನ ಇರಬೇಕೆನ್ನುವುದು ನಮ್ಮ ಹಕ್ಕಿನ ಬೇಡಿಕೆಯಾಗಿದೆ.

ಈ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ಇಡುವುದು ಅತ್ಯಂತ ಸೂಕ್ತವಾದುದಾಗಿದೆ. ಬೆಂಗಳೂರು ನಗರವನ್ನು ನಿರ್ಮಾಣ ಮಾಡಿದ ಕನ್ನಡಿಗರ ಹೆಮ್ಮೆಯ ದೊರೆಯಾದ ಕೆಂಪೇಗೌಡರ ದೂರದೃಷ್ಟಿಯ ಫಲವಾಗಿಯೇ ಇಂದಿನ ಈ ಬೆಂಗಳೂರು ಇಂತಹ ಮಹಾನಗರವಾಗಿ ಮೈ ತಳೆದು ನಿಂತಿರುವುದು. ಇಡೀ ಪ್ರಪಂಚಕ್ಕೇ ಆ ಮಹಾನ್ ವ್ಯಕ್ತಿಯ ಹೆಸರನ್ನು ಪರಿಚಯಿಸುವುದು ಕನ್ನಡಿಗರಿಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಆ ಕಾರಣದಿಂದಾಗಿ ದೇವನಹಳ್ಳಿಯ ಈ ಹೊಸ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರಿಡಬೇಕೆಂದು ಆಗ್ರಹಿಸಲಾಯಿತು.

ಕನ್ನಡನಾಡಿನಲ್ಲಿ ಚುನಾಯಿತ ಜನಪ್ರತಿನಿಧಿಗಳೇ ಇಲ್ಲದಿರುವ ಈ ಸಂದರ್ಭದಲ್ಲಿ, ಅಂತಹ ಚುನಾಯಿತ ಸಭೆಯೊಂದು ಇನ್ನೇನು ಅಸ್ತಿತ್ವಕ್ಕೆ ಬರುವ ಸಮಯದಲ್ಲಿ ಅದಕ್ಕೆ ಮುನ್ನವೇ ತರಾತುರಿಯಿಂದ ಈ ವಿಮಾನ ನಿಲ್ದಾಣವನ್ನು ನಾಡಿಗೆ ಅರ್ಪಿಸುತ್ತಿರುವುದನ್ನು ಖಂಡಿಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆಯು ಈ ಎಲ್ಲ ಆಗ್ರಹಗಳನ್ನು ಸಲ್ಲಿಸಲು ಸಂಬಂಧಪಟ್ಟವರ ಗಮನಕ್ಕೆ ತರಲು ಹಮ್ಮಿಕೊಂಡಿದ್ದ ಈ ಬೃಹತ್ ಜಾಥದ ಯಶಸ್ಸು ನಿಜಕ್ಕೂ ಈ ಬೇಡಿಕೆಗಳು ಈಡೇರಿದಾಗಲೇ ಎಂಬುದು ನಮ್ಮ ನಂಬಿಕೆ. ಮುಂದಿನ ದಿನಗಳಲ್ಲಿ ಈ ಹೋರಾಟದಲ್ಲಿ ತಾವುಗಳೂ ಭಾಗವಹಿಸಿ ನಮ್ಮೊಂದಿಗೆ ಕೈಜೋಡಿಸಬೇಕೆಂದು ಈ ಮೂಲಕ ಕೋರುತ್ತೇವೆ.

ಟಿ ಏ ನಾರಾಯಣಗೌಡ
ರಾಜ್ಯಾಧ್ಯಕ್ಷರು,
ಕರ್ನಾಟಕ ರಕ್ಷಣಾ ವೇದಿಕೆ

**************************************************************************


ಈ ಹಿಂದಿನ ಅಧ್ಯಕ್ಷರ ನುಡಿ ಸಂಚಿಕೆಗಳನ್ನು ಕೆಳಗಿನ ಕೊಂಡಿಗಳಲ್ಲಿ ಓದಿರಿ:-


 

ಸಂಘಟನೆ - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ